ಪೆರಿಯಾಂಡರ್ - 
ಕ್ರಿ. ಪೂ. 625-585, ಗ್ರೀಸಿನ ಪ್ರಾಚೀನ ನಗರವಾದ ಕಾರಿಂತಿನ ಎರಡನೆಯ ನಿರಂಕುಶ ದೊರೆ. ಈತನ ತಂದೆ ಸಿಪ್ಸೆಲಸ್ ಈ ವಂಶದ ಸ್ಥಾಪಕ ಎನ್ನಲಾಗಿದೆ. ಪೆರಿಯಾಂಡರ್ ಶ್ರೀಮಂತರನ್ನು ನಿರ್ದಯವಾಗಿ ಕಂಡನೆಂಬ ಹೇಳಿಕೆಯಿದ್ದರೂ ಈತನ ಬಗ್ಗೆ ದೊರಕಿರುವ ವಿಷಯಗಳತ್ತ ಗಮನ ಹರಿಸಿದಾಗ ಈತ ದೂರದೃಷ್ಟಿಯ ಪ್ರಾಮಾಣಿಕತೆ ಮತ್ತು ದೃಢ ಚಿತ್ತವುಳ್ಳವನಾಗಿದ್ದು ಭದ್ರ ಸರ್ಕಾರ ರಚಿಸಿ ಆಳಿದನೆಂದು ತಿಳಿಯುವುದು. ಈತನ ಸುಗಮ ಒಳಾಡಳಿತದಲ್ಲಿ ನೇರ ತೆರಿಗೆಯನ್ನು ಮನ್ನಾ ಮಾಡಲಾಗಿತ್ತು. ವಸಾಹತು ಸ್ಥಾಪನೆಯ ದೂರದೃಷ್ಟಿಯುಳ್ಳವನಾಗಿ ಕಾರಿಂತಿನ ವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ. ಈತ ಸಾಹಿತ್ಯ ಪ್ರಿಯ. ಗ್ರೀಸಿನ ಆವೇಶಭರಿತ ಮೇಳಗಾನವನ್ನು ವ್ಯವಸ್ಥಾಪಿಸಲು ಕವಿ ಏರಿಯನ್‍ನನ್ನು ಕಾರಿಂತಿಗೆ ಬರಮಾಡಿಕೊಂಡ. ಕಾರಿಂತಿನ ವಾಣಿಜ್ಯಾಭಿವೃದ್ಧಿಗಾಗಿ ಪೊಸಿಡಿಯಾ, ಮ್ಯಾಸಿಡೋನಿಯಾದ ಅಪೊಲೋನಿಯಾ, ಅನಕ್ಟೋರಿಯಮ್ ಮತ್ತು ಲೂಕಾಸ್ ಪಟ್ಟಣಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದ. ಇಸ್ತಮಸ್ ಮೂಲಕ ಒಂದು ಕಾಲುವೆ ತೋಡಲು ಯೋಚಿಸಿದ್ದ. ಎಪಿಡರಸ್ ನಗರವನ್ನು ಗೆದ್ದ ಈತ ಕಾರ್ಸೈರವನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡ. ಮಿಲೆಟಸ್ ಮತ್ತು ಮಿತಿಲೆನಿಯಗಳ ನಿರಂಕುಶ ದೊರೆಗಳೊಂದಿಗೆ ಸ್ನೇಹ ಬೆಳೆಸಿದ. ಲಿಡಿಯ, ಈಜಿಪ್ಟ್, ಮತ್ತು ಪ್ರೀಜಿಯ ದೇಶಗಳ ದೊರೆಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದ. 

	ಪೆರಿಯಾಂಡರ್ ಗ್ರೀಸಿನ ಏಳು ಮಂದಿ ಸಂತರಲ್ಲಿ ಒಬ್ಬನೆಂದೂ 2000 ಸಾಲುಗಳ ಅನುಭಾವಿ ಪದ್ಯ ಸಂಕಲನದ ಕರ್ತೃವೆಂದೂ ಪರಿಗಣಿತನಾಗಿದ್ದರೂ ಈತ ಕೃತಿ ರಚಿಸಿದನೆನ್ನುವುದು ಶುದ್ಧಾಂಗ ಸುಳ್ಳು ಎನ್ನಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ